ಫಲಭರಿತತೆ ಮತ್ತು ಫಲವಂತಿಕೆ 

ಕ್ರಿಯಾಶೀಲ ಲಿಂಗಾಣುಗಳನ್ನು ಉತ್ಪಾದಿಸುವ ಸಾಮಥ್ರ್ಯ ಫಲಭರಿತತೆ (ಫೆಕಂಡಿಟಿ). ಸಜೀವ ಸಂತತಿಯನ್ನು ಪಡೆಯುವ ಮೂಲಕ ವಾಸ್ತವವಾಗಿ ಪ್ರದರ್ಶಿತವಾಗುವ ಮಟ್ಟ ಫಲವಂತಿಕೆ (ಫರ್ಟಿಲಿಟಿ). ಯಾವುದೇ ಜೀವಸಮಷ್ಟಿಯ ಪುನರುತ್ಪತ್ತಿ ದರವನ್ನು ಅದರ ಸದಸ್ಯರ ಫಲಭರಿತತೆ ಮತ್ತು ಅವರ ಕೂಡುವಿಕೆಗಳ ಫಲವಂತಿಕೆ ನಿರ್ಧರಿಸುತ್ತದೆ. ಮೊದಲನೆಯದನ್ನು ಸಮಷ್ಟಿ ತಲುಪಬಲ್ಲ ಗರಿಷ್ಠ ಪುನರುತ್ಪತ್ತಿ ಮಟ್ಟ ಎಂದೂ ಎರಡನೆಯದನ್ನು ಅದು ನಿಜವಾಗಿಯೂ ತಲಪಿದ ಮಟ್ಟ ಎಂದೂ ಪರಿಗಣಿಸುವುದುಂಟು. ಕಠಿನಪರಿಸರದಲ್ಲಿರುವ ಜೀವಿಗಳಲ್ಲಿ ಫಲಭರಿತತೆ ಸಾಮಾನ್ಯವಾಗಿ ಅಧಿಕ. ಸಂರಕ್ಷಿತ ಪರಿಸರದಲ್ಲಿರುವ ಜೀವಿಗಳಲ್ಲಿ ಕಡಿಮೆ. ಅಂದರೆ ಅನೇಕ ಶತ್ರುಗಳಿದ್ದು ಹಲವು ಅಪಾಯಗಳನ್ನು ಎದುರಿಸಬೇಕಾಗಿರುವ ಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಣುಗಳನ್ನು ಉತ್ಪಾದಿಸುತ್ತವೆ. ಕೆಲವು ಬಗೆಯ ಮೀನುಗಳು ವಾರ್ಷಿಕವಾಗಿ 800-7500 ಕೋಟಿ ಮೊಟ್ಟೆಗಳನ್ನು ಉತ್ಪಾದಿಸಿದರೂ ಅವುಗಳಿಂದ ವಾಸ್ತವವಾಗಿ ಜನಿಸುವ ಮರಿಮೀನುಗಳು ಮಾತ್ರ ಸಾವಿರದಲ್ಲಿ ಒಂದು! ಆದರೆ ಮಾನವನಂಥ ಸ್ತನಿಯಲ್ಲಿ ಫಲಭರಿತತೆ ಕಡಿಮೆಯಿದ್ದರೂ ಪುನರುತ್ಪತ್ತಿದರ ಹೆಚ್ಚಾಗಿಯೇ ಇದೆ. ಲಿಂಗಾಣುಗಳ ಸಂಖ್ಯೆ ಮತ್ತು ಕ್ರಿಯಾಶೀಲತೆ, ಜೀವಿಯ ಆಯುಷ್ಯ ಮತ್ತು ಸಂತಾನ ಪಡೆಯುವ ಅವಧಿ. ಅಂಡೋತ್ಪತ್ತಿಯ ಅವರ್ತಾಂಕ-ಇವನ್ನು ನಿರ್ಧರಿಸುವ ಅಂಶಗಳು ಫಲವಂತಿಕೆಯ ಮೇಲೆ ಪ್ರಭಾವಬೀರುತ್ತವೆ.

	ಸಜೀವ ಜನನಗಳ ಸಂಖ್ಯೆ ಫಲವಂತಿಕೆಯ ಸೂಚಕ. ಜನನಸಂಬಂಧಿ ವಿವರಗಳನ್ನು ಬಳಸಿ ಫಲವಂತಿಕೆಯನ್ನು ಅಂದಾಜುಮಾಡಬಹುದು. ಆದರೆ ಫಲಭರಿತತೆಯನ್ನು ನೇರವಾಗಿ ಅಳೆಯಲು ಬರದು. ಮಾನವಸಮಷ್ಟಿಯ ಫಲವಂತಿಕೆಗೆ ಯುಕ್ತಮಾನಕಗಳನ್ನು ರಚಿಸಲು ಯತ್ನಿಸಿದ್ದಾರೆ. ಈ ಕೆಲಸ ಸುಲಭವಲ್ಲ. ಕಾರಣಗಳು ಹಲವು: ಫಲವಂತಿಕೆಗಿರುವ ಹಲವು ವ್ಯಾಖ್ಯೆಗಳು, ಜನನ ವಿತರಣೆಯಲ್ಲಿಯ ವೈಚಿತ್ರ್ಯ, ಹೆಚ್ಚಾಗಿ ಬೇರೆ ಉದ್ದೇಶಕ್ಕಾಗಿ ಸಂಗ್ರಹಿಸಿದ ಮಾಹಿತಿಯನ್ನು ಬಳಸಬೇಕಾದುದು, ದತ್ತಾಂಶಗಳಲ್ಲಿರುವ ಕುಂದುಕೊರತೆ ಇತ್ಯಾದಿ.

.	ಜನನಗಳ ಅವರ್ತಾಂಕವೇ ಫಲವಂತಿಕೆಯ ಮಾಪನಕ್ಕೆ ತಳಹದಿ. ಯಾವುದೇ ಪಂಚಾಂಗವರ್ಷದಲ್ಲಿ ಸಂಭವಿಸಿದ ಜನನ ಮತ್ತು ಜನಸಂಖ್ಯಾಮಾಹಿತಿ ಬಳಸಿ ಜನನದರ ಗಣಿಸುವುದು ಒಂದು ಮಾರ್ಗ, ಸಂತಾನಪಡೆಯುವ ಅವಧಿಯಲ್ಲಿ ವ್ಯಕ್ತಿಗೆ/ದಂಪತಿಗೆ ಆಗುವ ಸಂತತಿಯ ಸರಾಸರಿ ಸಂಖ್ಯೆಯನ್ನು (ಪೂರ್ಣಗೊಂಡ ಕುಟುಂಬಗಾತ್ರವನ್ನು) ತಿಳಿಯುವುದು ಇನ್ನೊಂದು ಮಾರ್ಗ. ಮೊದಲನೆಯದು ಹಲವು ವಿಭಿನ್ನ ವರ್ಗಗಳ ಪುನರುತ್ಪತ್ತಿ ಚಟುವಟಿಕೆಯ ದತ್ತ ವರ್ಷದ ಅಂಶವನ್ನು ಮಾತ್ರ ಒಳಗೊಂಡಿರುತ್ತದೆ. ಎರಡನೆಯದು ಒಂದು ವರ್ಗದ ಪೂರ್ಣಗೊಂಡ ಇಂಥ ಚಟುವಟಿಕೆಯನ್ನು ಪ್ರತಿನಿಧಿಸುತ್ತದೆ.

	ವಾರ್ಷಿಕ ಜನನದರಗಳು: ಜನಸಮಷ್ಟಿಯಲ್ಲಿ ಫಲವಂತಿಕೆಯನ್ನು ಅಳೆಯುವ ಮುಖ್ಯ ತಳಹದಿ ಯಾವುದರೊಂದು ವಾರ್ಷಿಕ ಸೂಚಿ. ಉದಾಹರಣೆಗೆ ಜನನಗಳ ವಾರ್ಷಿಕ ಸಂಖ್ಯೆ ಮತ್ತು ಆ ವರ್ಷದ ಯಾವುದಾದರೊಂದು ಸಂಬಂಧಿತ ಜನಸಂಖ್ಯೆಗಿರುವ ನಿಷ್ಪತ್ತಿ, ಕೆಳಗೆ ತಿಳಿಸಿರುವ ದರಗಳು ಸಾಮಾನ್ಯ ಬಳಕೆಯಲ್ಲಿವೆ:

	(i) ಕಚ್ಚಾ ಜನನದರ : ನೋಂದಾಯಿಸಿದ ಜನನಗಳ ವಾರ್ಷಿಕ ಸಂಖ್ಯೆ ಮತ್ತು ವರ್ಷಮಧ್ಯದ ಜನಸಂಖ್ಯೆ ಇವುಗಳ ನಿಷ್ಪತ್ತಿ.

	(ii) ಸಾರ್ವತ್ರಿಕ ಫಲವಂತಿಕೆದರ: ನೋಂದಾಯಿಸಿದ ಜನನಗಳ ವಾರ್ಷಿಕ ಮತ್ತು ಗರ್ಭಧರಿಸುವ ವಯಸ್ಸಿನ (15-44 ಯಾ 15-49) ಮಹಿಳೆಯರ ಸಂಖ್ಯೆಗಳ ನಿಷ್ಪತ್ತಿ. ಇಲ್ಲಿ ನಿಷ್ಪತ್ತಿಯ ಛೇದ ತಾಯಿಯಾಗಬಲ್ಲವರಿಗೆ ಮಾತ್ರ ಸೀಮಿತ.

	(iii) ವಯೋನಿರ್ದಿಷ್ಟ ಜನನದರ: ಯಾವುದೇ ವಯೋವರ್ಗದ ಮಹಿಳೆಯರಿಗೆ ಜನಿಸಿದ ಮಕ್ಕಳ ವಾರ್ಷಿಕ ಸಂಖ್ಯೆ ಮತ್ತು ಆ ವರ್ಗದ ಮಹಿಳೆಯರ ಒಟ್ಟು ಸಂಖ್ಯೆಗಳ ನಿಷ್ಪತ್ತಿ.

	(iv) ಶಿಶು-ಸ್ತ್ರೀ ನಿಷ್ಪತ್ತಿ : ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂಖ್ಯೆ ಮತ್ತು ಗರ್ಭಧರಿಸುವ ವಯಸ್ಸಿನ ಹೆಂಗಸರ ಸಂಖ್ಯೆಗಳ ನಿಷ್ಪತ್ತಿ.

	(v) ಸಮಗ್ರ ಫಲವಂತಿಕೆ ದರ : 15-49 ವರ್ಷ ವಯಸ್ಸಿನ ಮಹಿಳೆಯರ ಎಲ್ಲ ವಯೋನಿರ್ದಿಷ್ಟ ಜನನದರಗಳ ಮೊತ್ತ.

	(vi) ಕಚ್ಚಾಪುನರುತ್ಪತ್ತಿದರ; 15-49 ವರ್ಷ ವಯಸ್ಸಿನ ಮಹಿಳೆಯರ ಎಲ್ಲ ವಯೋನಿರ್ದಿಷ್ಟ ಜನನದರಗಳನ್ನು ಸ್ತ್ರೀ ಜನನಗಳಿಗೆ ಮಾತ್ರ ಅನ್ವಯಿಸುವಂತೆ ಲೆಕ್ಕಿಸಿ ಅವುಗಳ ಮೊತ್ತ.

	ಹೆಚ್ಚಿನ ಸಂದರ್ಭಗಳಲ್ಲಿ ದತ್ತಾಂಶಗಳು ಈ ದರಗಳ ಪೈಕಿ ಆಯ್ದುಕೊಳ್ಳುವ ಪ್ರಶ್ನೆ ಉದ್ಭವಿಸಲು ಅವಕಾಶವನ್ನೇ ನೀಡುವುದಿಲ್ಲ. ಉದಾಹರಣೆಗೆ, ಜನನಗಳ ಮತ್ತು ಜನರ ಸಂಖ್ಯೆ ಮಾತ್ರ ತಿಳಿದಿರುವಾಗ ಕಚ್ಚಾ ಜನನದರವನ್ನು ಮಾತ್ರ ಗಣಿಸಬಹುದು. ಜನಗಣಿತಿ ನೀಡುವ ವಯೋವಿತರಣೆ ಮಾತ್ರ ತಿಳಿದಿದ್ದು ಜನನಗಳ ವಿವರ ತಿಳಿಯದಿರುವಾಗ ಶಿಶು-ಸ್ತ್ರೀ ನಿಷ್ಪತ್ತಿಯನ್ನು ಗಣಿಸಬೇಕು, ಇತ್ಯಾದಿ.

	ಪೂರ್ಣಗೊಂಡ ಕುಟುಂಬದ ಗಾತ್ರ: ಹೆಂಗಸರ ಒಂದು ನಿರ್ದಿಷ್ಟ ಗುಂಪಿಗೆ ಜನಿಸುವ ಎಲ್ಲ ಮಕ್ಕಳನ್ನು ಗಣಿಸುವುದು ಫಲವಂತಿಕೆಯನ್ನು ಅಳೆಯುವ ಇನ್ನೊಂದು ವಿಧಾನ. ಅಂದರೆ ದತ್ತ ವರ್ಷದಲ್ಲಿ ಬೇರೆ ಬೇರೆ ಮಹಿಳೆಯರಿಗಾಗುವ ಜನನಗಳ ಮೊತ್ತದ ಬದಲು ಹೆಂಗಸರ ನಿರ್ದಿಷ್ಟ ಗುಂಪಿನಲ್ಲಿ ಅದರ ಜೀವಮಾನದಲ್ಲಿ ಆಗುವ ಎಲ್ಲ ಜನನಗಳ ಮೊತ್ತವನ್ನು ಪಡೆದು ಸರಾಸರಿಯನ್ನು ಗಣಿಸುವುದು. ಇದಕ್ಕೆ ಬೇಕಾಗುವ ಮಾಹಿತಿಗೆ ಮೂರು ತರಹದ ಮೂಲಗಳಿವೆ:
	(i) ಕಡಿಮೆಯೆಂದರೆ 30-35 ಅನುಕ್ರಮ ವರ್ಷಗಳ ವಯೋನಿರ್ದಿಷ್ಟ ಜನನಗಳು ತಿಳಿದಿದ್ದರೆ ಅವನ್ನು ಹೆಂಗಸರ ನಿರ್ದಿಷ್ಟ ಗುಂಪಿಗೆ ಅನ್ವಯಿಸುವಂತೆ ಒಟ್ಟುಗೊಳಿಸುವುದು.

	(ii) ಸ್ತ್ರೀಯರು ವೈಯಕ್ತಿಕವಾಗಿ ಇತ್ತ ಜನ್ಮದಾಖಲೆಗಳನ್ನು ಬಳಸುವುದು. ಸುಮಾರು 35 ಅನುಕ್ರಮ ವರ್ಷಗಳ ಇಂಥ ಮಾಹಿತಿ ಇದ್ದಲ್ಲಿ ಸ್ತ್ರೀಯರ ನಿರ್ದಿಷ್ಟ ಗುಂಪಿನ ಪುನರುತ್ಪಾದನೆ ಚರಿತ್ರೆ ತಿಳಿಯುವುದು ಸಾಧ್ಯ. ಆದರೆ ಇಂಥ ಮಾಹಿತಿ ಸಿಗುವುದು ವಿರಳ.

	(iii) ಜನಗಣತಿ ಯಾ ವಿಶೇಷ ಸಮೀಕ್ಷೆಗಳ ಸಂದರ್ಭದಲ್ಲಿ ವಯಸ್ಕರು ವೈಯಕ್ತಿಕವಾಗಿ ನೀಡಿದ ವರದಿಗಳ ಬಳಕೆ. ಪ್ರತಿ ಮಹಿಳೆಗೆ ಜನಿಸಿದ ಮಕ್ಕಳ ಒಟ್ಟು ಸಂಖ್ಯೆ ಮತ್ತು ಪ್ರತಿ ಮಗುವಿನ ಜನನ ತಾರೀಕಿನ ಕುರಿತ ಪ್ರಶ್ನೆಗೆ ಉತ್ತರವಾಗಿ ಈ ಮಾಹಿತಿ ಇರುತ್ತದೆ. ಫಲವಂತಿಕೆಯ ಮಾಪನ ಜನಸಂಖ್ಯಾವೃದ್ಧಿಯ ಪ್ರರೂಪವನ್ನು ತಿಳಿಯಲು ಅತ್ಯವಶ್ಯ.			(ಎಸ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ